ಧ್ಯೇಯ ಮತ್ತು ಉದ್ದೇಶ
ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯದ ಹೆಮ್ಮೆಯ ಅಂಗ ಸಂಸ್ಥೆ. ಇದಕ್ಕೆ ಈ ಹೆಸರನ್ನು ಕೊಟ್ಟವರು ರಾಷ್ಟ್ರಕವಿ ಕುವೆಂಪು ಅವರು; ಅಷ್ಟು ಮಾತ್ರವಲ್ಲ ಅವರು ಪ್ರಸಾರಾಂಗವನ್ನು “ವಿಶ್ವವಿದ್ಯಾನಿಲಯದ ಜೀವನಾಡಿ ಮಿಡಿಯುತ್ತಿರುವ ಹೃದಯ” ಎಂಬುದಾಗಿ ಕರೆದಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಾರಂಭವಾದುದು 1933 ಅಂದರೆ ಇದಕ್ಕೆ 87 ವರ್ಷಗಳ ಸುದೀರ್ಘವೂ, ಶ್ರೀಮಂತವೂ ಆದ ಇತಿಹಾಸವಿದೆ. ಪ್ರಚಾರೋಪನ್ಯಾಸ, ಕನ್ನಡ ಗ್ರಂಥಮಾಲೆ, ಪಠ್ಯಪುಸ್ತಕ ಮಾಲೆ, ವಿಶೇಷ ಉಪನ್ಯಾಸ ಪುಸ್ತಕ ಮಾಲೆ ಸರ್ ಕೆ.ಪಿ.ಪುಟ್ಟಣ್ಣಚೆಟ್ಟಿಯವರ ಪುದುವಟ್ಟಿನ ಪ್ರಕಟಣ ಮಾಲೆ, ಹೀಗೆ ಬೇರೆ ಬೇರೆ ಶೀರ್ಷಿಕೆಗಳ ಅಡಿಯಲ್ಲಿ ಅದು ವೈವಿಧ್ಯಮಯವಾದ ಮತ್ತು ಮೌಲಿಕವಾದ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. ಇದರಲ್ಲಿ ಪ್ರಚಾರೋಪನ್ಯಾಸ ಮಾಲೆಯಂತೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಯೋಗ ಎಂದು ವಿಶ್ವಮಟ್ಟದಲ್ಲಿ ಪ್ರಖ್ಯಾತವಾಗಿದೆ. (1934 ರಲ್ಲಿ ಆಕ್ಸಫರ್ಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದ ಸಮ್ಮೇಳನ. ಮೈಸೂರು ವಿ.ವಿ.ಪ್ರತಿನಿಧಿ ಪ್ರೊ.ಜಿ.ಸಿ.ರಾಲೋ ಆಗಿದ್ದರು)
ಪ್ರಸಾರಾಂಗ ಇದುವರೆಗೆ ನಾಲ್ಕುನೂರ ಇಪ್ಪತ್ತೈದಕ್ಕು ಅಧಿಕ ಪ್ರಚಾರೋಪನ್ಯಾಸ ಕೃತಿಗಳನ್ನು ಪ್ರಕಟಿಸಿದೆ. ಪ್ರಸಾರಾಂಗದ ಇದುವರೆಗಿನ ಒಟ್ಟು ಪ್ರಕಟಣೆಗಳ ಸಂಖ್ಯೆ 850.
ಪ್ರಸಾರಾಂಗವು ಪ್ರಬುದ್ಧ ಕರ್ಣಾಟಕ, ಮಾನವಿಕ ಕರ್ಣಾಟಕ, ವಿಜ್ಞಾನ ಕರ್ಣಾಟಕ, ಮೈಸೊಸೈಟಿ, ಮೈಸೈನ್ಸ್ ಎಂಬ ಐದು ನಿಯತಕಾಲಿಕೆಗಳನ್ನು ಪ್ರಕಟಿಸುತ್ತಾ ಬಂದಿದೆ. ಇದರಲ್ಲಿ ಪ್ರಬುದ್ಧ ಕರ್ಣಾಟಕ ನೂರು ವರ್ಷಗಳನ್ನು, ಮಾನವಿಕ ಮತ್ತು ವಿಜ್ಞಾನ ಕರ್ಣಾಟಕಗಳು ಐವತ್ತು ವರ್ಷಗಳನ್ನು ಪೂರೈಸಿವೆ.
ಪ್ರಸಾರಾಂಗ ನಡೆದು ಬಂದ ದಾರಿ ಸಾರ್ಥಕವಾಗಿದ್ದರೂ ಇನ್ನು ಮುಂದೆ ಅದು ಕ್ರಮಿಸಬೇಕಾದ ದಾರಿ ಸವಾಲಿನ ಸ್ವರೂಪದ್ದಾಗಿದೆ ಎಂಬುದನ್ನು ಮರೆಯುವಂತಿಲ್ಲ. ಅಂತಹವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ
1. ಮಹತ್ವದ ಕೃತಿಗಳ ಪುನರ್ ಮುದ್ರಣ ಕಾರ್ಯ ತೃಪ್ತಿಕರವಾಗಿ ಆಗಬೇಕಾಗಿದೆ.
2. ಪ್ರಸಾರಾಂಗ ಪ್ರಕಟಿಸಿರುವ ಪುಸ್ತಕವನ್ನು ಆನ್ಲೈನ್ ವ್ಯವಸ್ಥೆಯಲ್ಲು ಮಾರಾಟ ಮಾಡುವ ಸೌಲಭ್ಯ ಹೊಂದಬೇಕಾಗಿದೆ.
3. ನಮ್ಮ ನಿಯತಕಾಲಿಕೆಗಳು ಸಕಾಲಿಕವಾಗಿ ಬರುವಂತೆ ನೋಡಿಕೊಳ್ಳಬೇಕಾಗಿದೆ.
4. ಪ್ರಸಾರಾಂಗದಿಂದ ಪ್ರಕಟಣೆಗಾಗಿ ಕೋರಿ ಬಂದ ಹಸ್ತಪ್ರತಿಗಳನ್ನು ಇನ್ನೂ ತ್ವರಿತಗತಿಯಲ್ಲಿ ಮುದ್ರಿಸುವ ವ್ಯವಸ್ಥೆ ಆಗಬೇಕಾಗಿದೆ.
5. ಪ್ರಸಾರಾಂಗದ ಮಹತ್ವದ ಪ್ರಕಟಣೆಗಳನ್ನು ಜನರ ಬಳಿಗೆ ತಲುಪಿಸಲು ಸಂಚಾರಿ ಮಾರಾಟ ಮಳಿಗೆಯುಳ್ಳ ವಾಹನವೊಂದನ್ನು ಪ್ರಸಾರಾಂಗ ಹೊಂದಬೇಕಾಗಿದೆ.
ಈ ಎಲ್ಲಾ ಮಿತಿಗಳ ನಡುವೆಯೂ ರಾಜ್ಯದ ಇನ್ನಿತರ ವಿಶ್ವವಿದ್ಯಾನಿಲಯಗಳಿಗಿಂತ ಮತ್ತು ರಾಷ್ಟ್ರಮಟ್ಟದಲ್ಲಿ ನಮ್ಮ ಪ್ರಸಾರಾಂಗದ ಸಾಧನೆ ಹೆಮ್ಮೆಪಡುವಂತಿದೆ ಎಂಬುದು ಸಂತಸದ ಸಂಗತಿ.