• iconಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು-06

ಪ್ರಸ್ತಾವನೆ

ಜ್ಞಾನ ಪ್ರಸಾರದ ಸದುದ್ದೇಶದಿಂದ 22 ಮೇ 1933 ರಲ್ಲಿ ಸ್ಥಾಪನೆಯಾದ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯದ ಉತ್ತುಂಗ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು . ಬೋಧನಾಂಗ , ಕಾರ್ಯಾಂಗಗಳ ಜೊತೆಗೆ ಪ್ರಸಾರಾಂಗವು ವಿಶ್ವವಿದ್ಯಾನಿಲಯದ ಆಧಾರ ಸ್ತಂಭವಾಗಿದೆ…

ಜ್ಞಾನ ಪ್ರಸರಣಕ್ಕೆ ಇಂಥದ್ದೆ ಒಂದು ಮಾಧ್ಯಮ ಸಾಕು ಎಂದು ಹೇಳುವಂತಿಲ್ಲ. ಜ್ಞಾನ ಎಲ್ಲೆಡೆ ಪಸರಿಸಬೇಕು, ಯಾವುದೇ ಒಂದು ವಿಶ್ವವಿದ್ಯಾನಿಲಯದ ಕೆಲಸ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಕಲಿಸುವುದಲ್ಲ. ಅದರ ಧ್ಯೇಯ ಹಳ್ಳಿಯ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಅದು ಸಾಫಲ್ಯತೆಯನ್ನು ಕಂಡುಕೊಳ್ಳುತ್ತದೆ. ಇದಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಜೀವನಾಡಿಯಾಗಿ, ಹೃದಯವಾಗಿ ‘ನಹಿ ಜ್ಞಾನೇನ ಸದೃಶಂ’ ಎಂಬ ಶಿರೋನಾಮೆಗೆ ಅರ್ಥ ಕಲ್ಪಿಸಲು ಜ್ಞಾನ ದಾಸೋಹವನ್ನು ಹಳ್ಳಿಯ ಮನೆಮನೆಗೂ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದ ಪ್ರಸಾರಾಂಗದ ಹುಟ್ಟನ್ನು ಮೊದಲ ಸೆನೆಟ್ ಸಭೆಯ ಭಾಷಣದಲ್ಲಿಯೇ ಗುರುತಿಸಬಹುದು. “ಕಾರಣಾಂತರಗಳಿಂದ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಲು ಅಶಕ್ತರಾದ ಜನಸಾಮಾನ್ಯರಿಗೆ ವಿಶ್ವವಿದ್ಯೆಯ ಪರಿಚಯ ಮಾಡಿಕೊಡಲು ನಮ್ಮ ವಿಶ್ವವಿದ್ಯಾನಿಲಯ ಶ್ರಮಿಸಬೇಕು. ಈ ಕಾರ್ಯವು ಪ್ರಚಾರೋಪನ್ಯಾಸ ಮತ್ತು ಪ್ರಕಟಣೆಗಳ ಮೂಲಕ ನಡೆಯಬೇಕಾಗಿದೆ. ಅತ್ಯಂತ ಪ್ರಯೋಜನಕಾರಿಯಾದ ಈ ಮಹತ್ಕಾರ್ಯವನ್ನು ವಿಶ್ವವಿದ್ಯಾನಿಲಯವು ಬೇಗನೆ ಕಾರ್ಯರೂಪಕ್ಕೆ ತರುವುದೆಂದು ನಂಬಿದ್ದೇನೆ”ಎಂದು ಹೇಳಿದ ನಾಲ್ವಡಿ ಕೃಷ್ಣರಾಜ ಒಡೆಯರ ಮಾತುಗಳು ಪ್ರಸಾರಾಂಗಕ್ಕೆ ಅಸ್ತಿಭಾರ ಹಾಕಿದವು.

ಪ್ರಸಾರಾಂಗದ ಮುಖ್ಯ ಉದ್ದೇಶ ಗ್ರಂಥೋದ್ಯಮವಾಗಿ ಬೆಳೆವಣಿಗೆ ಹೊಂದುವದರೊಂದಿಗೆ ಕನ್ನಡದ ನಾಡು-ನುಡಿ ಸಾಹಿತ್ಯದ ಬೆಳೆವಣಿಗೆ ಶ್ರಮಿಸುವುದಾಗಿದೆ. ಗ್ರಂಥೋದ್ಯಮವೆಂದರೆ ಗ್ರಂಥಗಳ ರಚನೆ, ಪ್ರಕಾಶನ, ಮುದ್ರಣ ಮತ್ತು ಸಂಗ್ರಹ. ಈ ನಾಲ್ಕೂ ಅಂಶಗಳು ಪ್ರಸಾರಾಂಗದಲ್ಲಿ ಮೈತಳೆದಿವೆ. ಇವುಗಳ ಒಟ್ಟು ಮೊತ್ತವಾಗಿ ಪ್ರಸಾರಾಂಗ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗದು. ಕನ್ನಡ ನುಡಿಯ ಬೆಳೆವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ಣಾಟಕ ವಿದ್ಯಾವರ್ಧಕ ಸಂಘಗಳ ಸ್ಥಾಪನೆ ಹೊಸ ಬೆಳಕನ್ನೇ ಚೆಲ್ಲಿದವು. ಅದರಂತೆ ಪ್ರಸಾರಾಂಗ ಕೂಡ ಜನಮಾನಸದಲ್ಲಿ ಕನ್ನಡ ನುಡಿಯ ದೀಪ ಬೆಳಗಬೇಕು ಎಂಬ ನಿಲುವಿನೊಂದಿಗೆ ಕಾರ್ಯನಿರತವಾಗಿರುವುದು ಸ್ತುತ್ಯಾರ್ಹವಾದ ಅಂಶ. ಪ್ರತಿಯೊಬ್ಬ ಕವಿಯ ಪ್ರತಿಯೊಂದು ಕಾವ್ಯವನ್ನು ಪ್ರತಿಯೊಬ್ಬರು ಆಮೂಲಾಗ್ರವಾಗಿ ಓದುವುದು ಸಾಧ್ಯವಿಲ್ಲ. ಈಗ ವಿದ್ಯಾ ಪ್ರಾಚುರ್ಯ ವಿಶೇಷದಿಂದಲೂ ಮುದ್ರಣದ ಸೌಕರ್ಯದ ವಿಶೇಷದಿಂದಲೂ ಗ್ರಂಥ ಸಂಖ್ಯಾವೃದ್ಧಿಯು ಹೇರಳವಾಗಿ ಆಗುತ್ತಿದೆ. ಇಂಥ ಕಾಲದಲ್ಲಿ ಕಾವ್ಯರಾಶಿಯೊಳಗಿನ ಉತ್ತಮ ಕೃತಿಗಳ ಸಾರಾಂಶವನ್ನು ಸಂಗ್ರಹಿಸಿ ಜನರ ಮುಂದಿರಿಸಲು ಪ್ರಸಾರಾಂಗದ ಪುಸ್ತಕ ಮಾಲೆಗಳು ಸಹಕಾರಿಯಾಗಿವೆ. ನಿತ್ಯ ಪರಿವರ್ತನಶೀಲವಾದ ಜಗತ್ತಿನ ಮಾನವನ ಜ್ಞಾನವನ್ನು ವಿಕಾಸಗೊಳಿಸುತ್ತಾ, ಅರ್ಥಪೂರ್ಣ ಗ್ರಂಥಗಳ ಪ್ರಕಟಣೆಗಳ ಮೂಲಕ ಓದುಗನಿಗೆ ಒದಗಿಸುವ ಕಾರ್ಯವನ್ನು ಮಾಡುತ್ತಿದೆ.

ಕನ್ನಡ ಸಾಹಿತ್ಯದ ಬೆಳೆವಣಿಗೆಯಲ್ಲಿ ಪ್ರಸಾರಾಂಗ ಮತ್ತು ಅದರ ಪ್ರಮುಖ ನಿಯತಕಾಲಿಕೆಗಳಾದ ಪ್ರಬುದ್ಧ ಕರ್ಣಾಟಕ, ಮಾನವಿಕ ಕರ್ಣಾಟಕ, ವಿಜ್ಞಾನ ಕರ್ಣಾಟಕ ಮತ್ತು ಮೈಸೈನ್ಸ್ ಮತ್ತು ಮೈಸೊಸೈಟಿ ಇವುಗಳ ಕೊಡುಗೆ ಅನನ್ಯವಾದದು. ಕಲಿಕೆಗೆ ವಿಶ್ವವಿದ್ಯಾನಿಲಯಕ್ಕೆ ಬರಲು ಅವಕಾಶವಿಲ್ಲದವರ ಮನೆ ಬಾಗಿಲಿಗೆ ವಿಶ್ವವಿದ್ಯಾನಿಲಯವನ್ನೇ ಒಯ್ಯುತ್ತಿರುವ ಸಂಸ್ಥೆಯೇ ಪ್ರಸಾರಾಂಗ. ಈ ಹಿನ್ನೆಲೆಯಲ್ಲಿ ಪ್ರಸಾರಾಂಗವು 1933 ರಲ್ಲಿ ಸ್ಥಾಪನೆಯಾಯಿತು.

ಪ್ರಸಾರಾಂಗದಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರು

 

ಸುಬ್ಬರಾಯಾಚಾರ್

ತ. ಸು. ಶಾಮರಾಯ