ಪ್ರೊ.ಲೋಕನಾಥ ಎನ್.ಕೆ
ಗೌರವಾನ್ವಿತ ಉಪಕುಲಪತಿಗಳು
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ದೂರದರ್ಶಿತ್ವ ಮತ್ತು ಒತ್ತಾಸೆಯಿಂದ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಗೊಂಡು 105 ವಸಂತಗಳನ್ನು ಪೂರೈಸಿದೆ. ಉನ್ನತ ಶಿಕ್ಷಣ ಮತ್ತು ಅತ್ಯುತ್ತಮ ಜ್ಞಾನ ಸಂಪಾದನೆ ಎಲ್ಲರಿಗೂ ದೊರಕಲಿ ಎಂಬ ಆಶಯದಲ್ಲಿ ಮುನ್ನಡೆಯುತ್ತಾ ಬಂದಿರುವ ವಿಶ್ವವಿದ್ಯಾನಿಲಯವು ತನ್ನ ಕಾರ್ಯಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುವ ಹಿನ್ನೆಲೆಯಲ್ಲಿ 1933ರಲ್ಲಿ ಪ್ರಸಾರಾಂಗವನ್ನು ಸ್ಥಾಪಿಸಿತು. ಪ್ರಸಾರಾಂಗವು ಕಳೆದ 88 ವರ್ಷಗಳಿಂದಲೂ ಪ್ರಚಾರೋಪನ್ಯಾಸ, ಪಠ್ಯಪುಸ್ತಕ ಮತ್ತು ವಿಷಯಾಧಾರಿತ ಪುಸ್ತಕಗಳ ಪ್ರಕಟಣೆಯ ಜವಾಬ್ದಾರಿಯನ್ನು ಹಲವು ಆಯಾಮಗಳಲ್ಲಿ ಮುನ್ನಡೆಸಿಕೊಂಡು ಬಂದಿದೆ. ಇದುವರೆಗೂ 2800ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದು ಒಂದು ಇತಿಹಾಸವೆಂದು ಭಾವಿಸಿದ್ದೇನೆ. ಪ್ರಬುದ್ಧ ಕರ್ಣಾಟಕ, ಮಾನವಿಕ ಕರ್ಣಾಟಕ ಮತ್ತು ವಿಜ್ಞಾನ ಕರ್ಣಾಟಕ ಎಂಬ ನಿಯತಕಾಲಿಕೆಗಳನ್ನು ಪ್ರಸಾರಾಂಗವು ಪ್ರಕಟಿಸುತ್ತಾ ಬಂದಿದ್ದು ಪ್ರಬುದ್ಧ ಕರ್ಣಾಟಕ ನೂರು ವರ್ಷ ಹಾಗೂ ಮಾನವಿಕ ಕರ್ಣಾಟಕ ಮತ್ತು ವಿಜ್ಞಾನ ಕರ್ಣಾಟಕ 50 ವರ್ಷಗಳನ್ನು ಪೂರೈಸಿವೆ. ವಿಶ್ವವಿದ್ಯಾನಿಲಯದ 3ನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾರಾಂಗದ ಕಾರ್ಯಚಟುವಟಿಕೆಗಳ ಸದುಪಯೋಗವನ್ನು ಈ ಮೂಲಕ ಎಲ್ಲರೂ ಬಳಸಿಕೊಳ್ಳಲಿ ಎಂಬುದು ನನ್ನ ಆಶಯ.
ಪ್ರೊ. ವಿ ಆರ್ ಶೈಲಜಾ
ಕುಲಸಚಿವರು
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಪೈಕಿ ಪ್ರಕಟಣೆ ವಿಭಾಗದಲ್ಲಿ ಅಗ್ರಸ್ಥಾನವನ್ನು ಹೊಂದಿರುವ ಹಿರಿಮೆಗೆ ಪಾತ್ರವಾಗಿದೆ. ಈ ಕಾರಣಕ್ಕಾಗಿಯೇ, ಪ್ರಸಾರಾಂಗವನ್ನು ಈ ದೇಶದಲ್ಲಿನ ಅಣೆಕಟ್ಟು ಅಥವಾ ಜಲಾಶಯಕ್ಕೆ ಹೋಲಿಸುತ್ತೇನೆ. ದೊಡ್ಡ ಜನಸಂಖ್ಯೆಗೆ ಸಂಪತ್ತು ಮತ್ತು ಆಹಾರವನ್ನು ಉತ್ಪಾದಿಸಲು ಜಲಾಶಯವು ನೀರನ್ನು ಸಂಗ್ರಹಿಸಿ ವಿಶಾಲವಾದ ಭೂಮಿಗೆ ವಿತರಿಸುವಂತೆಯೇ, ಪ್ರಸಾರಾಂಗವು ಕೂಡ ನಮ್ಮ ಜನರ ಬೌದ್ಧಿಕ ಅಗತ್ಯಗಳನ್ನು ಪೂರೈಸುತ್ತಿದೆ. ಹೀಗಾಗಿ, ಕನ್ನಡಿಗರ ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿಸುವಲ್ಲಿ ಇದರ ಕೊಡುಗೆ ಮಹತ್ವದ್ದಾಗಿದೆ. ಇತರ ರಾಜ್ಯಗಳ ಜನರು ಬಂದು ಪ್ರಸಾರಾಂಗದ ಕಾರ್ಯಚಟುವಟಿಕೆಗಳನ್ನು ಗಮನಿಸಿದಾಗ ಅವುಗಳು ಮತ್ತಷ್ಟು ಮುಂದುವರಿಯಲು ಪ್ರೇರೇಪಿಸುವಂತಿದೆ ನಮ್ಮ ಪ್ರಸಾರಾಂಗ.
ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಮೊದಲಿನಿಂದಲೂ ದಾಖಲಾರ್ಹ ಸಾಧನೆ ಮಾಡಿಕೊಂಡು ಬರುತ್ತಿದೆ. “ಪ್ರಬುದ್ಧ ಕರ್ಣಾಟಕ”,”ವಿಜ್ಞಾನ ಕರ್ಣಾಟಕ”, “ಮಾನವಿಕ ಕರ್ಣಾಟಕ”ಗಳಂತಹ ನಿಯತಕಾಲಿಕೆಗಳನ್ನು ಪ್ರಕಟಿಸಿ ಆ ಮೂಲಕ ಎಲ್ಲಾ ಶಾಖೆಗಳಲ್ಲಿ ಜ್ಞಾನವನ್ನು ಎಲ್ಲಾ ಓದುಗರಿಗೂ ಪಸರಿಸುವ ಕಾರ್ಯಮಾಡುತ್ತಿದೆ. ಈ ವಿಭಾಗ ಇತ್ತೀಚೆಗೆ ತನ್ನದೇ ಆದ ಜಾಲತಾಣವನ್ನು(ವೆಬ್‍ಸೈಟ್) ಪ್ರಾರಂಭಿಸಿ ಆ ಮೂಲಕ ಎಲ್ಲಾ ಆಸಕ್ತ ಓದುಗರಿಗೆ ಮಾಹಿತಿಯನ್ನು ಬೆರಳಿನ ತುದಿಯಲ್ಲಿ ದೊರೆಯುವಂತೆ ಮಾಡಿರುವುದು ಇದರ ಮತ್ತೊಂದು ಸಾಧನೆಯಾಗಿದೆ. ಈ ಜ್ಞಾನದ ಮೂಲವನ್ನು ಎಲ್ಲಾ ಓದುಗರು ಬಳಸಿಕೊಂಡು ನಾಡಿನ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕೆಂದು ಆಶಿಸುತ್ತೇನೆ.
ಪ್ರೊ.ನಂಜಯ್ಯ ಹೊಂಗನೂರು
ನಿರ್ದೇಶಕರು
ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ ಎಂದಾದ ಮೇಲೆ ಅದರ ಸಮರ್ಪಕ ಪ್ರಸಾರಕಾರ್ಯ ನಡೆಯಬೇಕಲ್ಲವೆ? ಈ ಹಿನ್ನೆಲೆಯಲ್ಲಿ ತನ್ನ ಸಾಮಥ್ರ್ಯನುಸಾರ ಮಹಾಮಣಿಹವನ್ನಿಟ್ಟುಕೊಂಡು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾದ ಸಂಸ್ಥೆಯೇ ಪ್ರಸಾರಾಂಗ. ಮೈಸೂರು ವಿಶ್ವವಿದ್ಯಾನಿಲಯವು ನಡೆಸಿಕೊಂಡು ಬರುತ್ತಿದ್ದ ಪ್ರಕಟಣಾ ಚಟುವಟಿಕೆಯ ಕೇಂದ್ರಕ್ಕೆ ‘ಪ್ರಸಾರಾಂಗ’ ಎಂದು ನೂತನ ಹೆಸರನ್ನು ಕೊಡುವುದರ ಜೊತೆಗೆ(1933) ಅದಕ್ಕೆ ಹೊಸ ದಿಕ್ಕು ದೆಸೆ ಸೂಚಿಸಿದವರು ಋಷಿಕವಿ, ರಾಷ್ಟ್ರಕವಿ ಕುವೆಂಪು ಅವರು.
ಮೈಸೂರು ವಿಶ್ವವಿದ್ಯಾನಿಲಯದ ಪ್ರಗತಿಯೊಂದಿಗೆ ಇದು ಸಮಾನವಾಗಿ ಹೆಜ್ಜೆ ಹಾಕಿ ಬೆಳೆದು ಬಂದಿದೆ. ಇದುವರೆಗೆ ಪ್ರಸಾರಾಂಗ ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ 2800 ಪುಸ್ತಕಗಳನ್ನು ಪ್ರಕಟಿಸುವ ಮೂಲಕ ದಾಖಲೆಯ ಸ್ವರೂಪದ ಸಾಧನೆ ಮಾಡಿದೆ. ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಸಿ.ಎ ಮೊದಲಾದ ಪದವಿ ತರಗತಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳನ್ನೂ ಒಳಗೊಂಡಂತೆ ವಿಶ್ವವಿದ್ಯಾನಿಲಯದ ಆಯ್ದ ಸಂಶೋಧನ ಮಹಾಪ್ರಬಂಧಗಳನ್ನು, ಜನೋಪಯೋಗಿಯಾದ ಬೇರೆಬೇರೆ ಕೃತಿಗಳನ್ನು ಪ್ರಕಟಿಸುವ ಮೂಲಕ ವಿಶ್ವವಿದ್ಯಾನಿಲಯದ ಜ್ಞಾನ ಗ್ರಂಥಗಳೆಂಬ ಕಾಲುವೆಗಳ ಮೂಲಕ ಹರಿದು ಸಮಾಜದೆಲ್ಲೆಡೆ ತಲುಪುವಂತಾಗಿದೆ.